ದಕ್ಷಿಣಾಗ್ನಿ -
ಯಜ್ಞದಲ್ಲಿ  ಉಪಯುಕ್ತವಾಗಿರುವ ಮೂರು ಅಗ್ನಿಗಳಲ್ಲಿ ಒಂದು. ಗಾರ್ಹಪತ್ಯ, ಅಹವನೀಯ (ನೋಡಿ- ಆಹವನೀಯ) ದಕ್ಷಿಣಾಗ್ನಿ ಎಂದು ಮೂರು ವಿಧ ಅಗ್ನಿಗಳಿವೆ. ಇವನ್ನು ತ್ರೇತಾಗ್ನಿ ಎಂದು ಕರೆಯುತ್ತಾರೆ. ಬ್ರಹ್ಮಚಯ, ಗ್ರರ್ಹಸ್ಥ, ವಾನಪ್ರಸ್ಥ, ಸಂನ್ಯಾಸವೆಂಬ ನಾಲ್ಕು ವಿಧ ಆಶ್ರಮಗಳಲ್ಲಿ ಗೃಹಸ್ಥಾಶ್ರಮದಲ್ಲಿರುವವರು ಅವಶ್ಯ ಮಾಡಬೇಕಾಗಿರುವ ಶ್ರೌತ ಮತ್ತು ಸ್ಮಾರ್ತ ಕರ್ಮಗಳಲ್ಲಿ ಮುಖ್ಯವಾದ ಶ್ರೌತಕರ್ಮಗಳನ್ನು (ಅಗ್ನಿಹೋತ್ರ ದರ್ಶಪೂರ್ಣಮಾಸ, ಸೋಮ ಯಾಗ ಮೊದಲಾದ ಶ್ರುತಿಯಲ್ಲಿ ತಿಳಿಸಿರುವ ಕರ್ಮಗಳು) ಮಾಡಲು ಈ ಮೂರು ಅಗ್ನಿಗಳೂ ಅತ್ಯಾವಶ್ಯಕ. ಕರ್ಮೋಪಯೋಗಿಯಾದ ಈ ಅಗ್ನಿಯನ್ನು ವಸಂತ ಋತುವಿನಲ್ಲಿ ಬ್ರಾಹ್ಮಣ ಸಾಧಿಸಿಕೊಳ್ಳಬೇಕು. ವಸಂತೇ ಬ್ರಾಹ್ಮಣೋ ಅಗ್ನೀನಾಧೀತ ಎಂದು ಶ್ರುತಿ ತಿಳಿಸಿದೆ. ಈ ಅಗ್ನಿ ಸಾಧನೆಗೆ ಆಧಾನವೆಂದು ಹೆಸರು.

ಯಜ್ಞ ಕರ್ಮಗಳನ್ನು ಮಾಡಲು ಕುಳಿತುಕೊಳ್ಳುವ ಯಜ್ಞವೇದಿಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣಭಾಗಗಳಲ್ಲಿ ಈ ಮೂರು ಅಗ್ನಿಗಳು ಇರುತ್ತವೆ. ಪೂರ್ವ ಭಾಗದಲ್ಲಿರುವ ಅಗ್ನಿ ಅಹವನೀಯ ಪಶ್ಚಿಮ ಭಾಗದಲ್ಲಿರುವ ಅಗ್ನಿ ಗಾರ್ಹಪತ್ಯದ, ದಕ್ಷಿಣ ಭಾಗದಲ್ಲಿರುವ ಅಗ್ನಿ ದಕ್ಷಿಣಾಗ್ನಿ. ದಕ್ಷಿಣಾಗ್ನಿಯ ಕುಂಡ ಅರ್ಧ ಚಂದ್ರಾಕಾರದಲ್ಲಿರುತ್ತದೆ. ಗಾರ್ಹಪತ್ಯದ ಅಗ್ನಿಕುಂಡದಿಂದ ಈ ದಕ್ಷಿಣಾಗ್ನಿ ಕುಂಡಕ್ಕೆ ಅಗ್ನಿಸ್ಥಾಪನೆ ಮಾಡಬೇಕು. ಅಥವಾ ಗಾರ್ಹಪತ್ಯಾಗ್ನಿ ಸ್ಥಾಪನಾನಂತರ ಆಹವನೀಯಾಗ್ನಿ ಸ್ಥಾಪನೆಗೆ ಮೊದಲು ಅಗ್ನೀಧ್ರ (ಯಜ್ಞಕಾರ್ಯದಲ್ಲಿ ಭಾಗವಹಿಸಿರುವ ಋತ್ವಿಜರಲ್ಲಿ ಒಬ್ಬ) ತಂದ ಲೌಕಿಕಾಗ್ನಿಯನ್ನು ಅಶ್ವತ್ಥ ಮೊದಲಾದ ಯe್ಞÁರ್ಹ ಅರಣಿಗಳಿಂದ ಕಡೆದು ಬಳಿಕ ಅದನ್ನು ದಕ್ಷಿಣಾಗ್ನಿ ಕುಂಡದಲ್ಲಿ ಸ್ಥಾಪಿಸಬೇಕು. ಇಲ್ಲವೇ ಬಹು ಪುಷ್ಟನಾದವನ (ಧನಿಕನ) ಮನೆಯಿಂದಲಾದರೂ ಅಗ್ನಿಯನ್ನು ತಂದು ಸ್ಥಾಪಿಸಬಹುದು. ಈ ಪಕ್ಷದಲ್ಲಿ ಯಾಗ ಮಾಡುವ ಯಜಮಾನ ಮುಂದೆ ಆ ಧನಿಕನ ಮನೆಯಲ್ಲಿ ಊಟ ಮಾಡಬಾರದೆಂದು ನಿಷೇಧವಿದೆ. ಉರಿಯುತ್ತಿರುವ ಮರದಿಂದಲಾದರೂ ಅಗ್ನಿಯನ್ನು ತಂದು ಪ್ರತಿಷ್ಠೆ ಮಾಡಬಹುದೆಂದಿದೆ. ದಕ್ಷಿಣಾಗ್ನಿಗೆ ಇದನ್ನು ಅನ್ವಾಹಾರ್ಯ ಪಚನವೆಂಬ ಹೆಸರೂ ಉಂಟು. ಈ ಅಗ್ನಿಯಲ್ಲಿ ಋತ್ವಿಜರು ದಕ್ಷಿಣಾರೂಪವಾದ ಹವಿಸ್ಸನ್ನು ಪಾಕ ಮಾಡುತ್ತಾರೆ. ಯಜ್ಞದಲ್ಲಿ ಆಹವನೀಯಾಗ್ನಿಯಲ್ಲೇ ಹೋಮಗಳು ಅಧಿಕ. ಕೆಲವು ಹೋಮಗಳನ್ನು ಮಾತ್ರ ಗಾರ್ಹಪತ್ಯ ಮತ್ತು ದಕ್ಷಿಣಾಗ್ನಿಗಳಲ್ಲಿ ಮಾಡುತ್ತಾರೆ. ಇಧ್ಮಪ್ರವೃಶ್ಚನ ಪಿಷ್ಟಲೇಪಫಲೀಕರಣ ಹೋಮಗಳನ್ನು ಮಾಡುವುದು ದಕ್ಷಿಣಾಗ್ನಿಯಲ್ಲಿಯೇ.  

ಅಗ್ನಿಗಳನ್ನು ಸಾಧಿಸಿಕೊಂಡಿರುವ ಆಹಿತಾಗ್ನಿ ಸತ್ತಾಗ ಅಹಿತಾಗ್ನಿಂ ಅಗ್ನಿಭಿರ್ದಹತಿಯಜ್ಞ ಪಾತ್ರೈಶ್ಚ ಎಂದು ತಿಳಿಸಿರುವಂತೆ ಆ ಅಗ್ನಿಗಳಿಂದಲೇ ಆತನನ್ನೂ ಯಜ್ಞ ಪಾತ್ರೆಗಳನ್ನೂ ಸುಡಬೇಕೆಂದಿದೆ. ಒಂದು ವೇಳೆ ಅಹಿತಾಗ್ನಿ ಪರಸ್ಥಳದಲ್ಲಿರುವಾಗ ಸತ್ತರೆ ವೈತಾನಂ ಪ್ರಕ್ಷಿಪೇದಪ್ಸು ಎಂದು ತಿಳಿಸಿರುವಂತೆ ಅವನ್ನು ನೀರಿಗೆ ಹಾಕಬೇಕು ಎಂದಿದೆ.				
	(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ